Monday, October 4, 2021

ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದ ಕವಿತೆಗಳು

 


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರ ೧೨೦ ನೇ ಜನ್ಮದಿನದ ಅಂಗವಾಗಿ (೧೦/೧೦/೨೦೨೧ ರವಿವಾರ)

ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದವರು :: ಭಾಗ ೦೧ 







ಸ್ಪರ್ಧೆಗಳು ರಚಿಸಿದ ಕನ್ನಡ ಕವಿತೆಗಳು :

((೧))

ಶೀರ್ಷಿಕೆ :  ಸಂಪನ್ಮೂಲಗಳ ನಾಶ


ಕಷ್ಟದಿಂದ ಕಲ್ಲುಗಳ ಹಾಕಿ ಕೊಡ ತುಂಬಿಸಿತು ಕಾಗೆ.

ಅದರಲ್ಲಿ ಹನಿ ನೀರು ಇಲ್ಲದೇ ಮೃತಪಟ್ಟ ಹಾಗೆ.

ಇದು ಮುಂದಿನ ಪೀಳಿಗೆಗೆ ನಾವು ಕೊಡುತ್ತಿರುವ ಕೊಡುಗೆ.

ಸ್ವಾರ್ಥಿಗಳ ಪ್ರಪಂಚದಲ್ಲಿ ಬದುಕು ನಡೆಸುವ ಕರ್ಮ ನಮಗೆ.


ಅತಿ ಆಸೆಯಿಂದ ಸಂಪನ್ಮೂಲಗಳು ಬರಿದಾಗುತ್ತಿದೆ.

ಇದರಿಂದ ಅಪಾಯಗಳು ಬೆಂಬಿಡದೆ ಕಾಡುತ್ತಿದೆ.

ಇದೆ ಮುಂದುವರೆದರೆ ಅನಾಹುತಗಳು ಕಾದಿದೆ.

ಈಗಾಗಲೇ ಪರಿಣಾಮಗಳು ಕಾಣಲು ಶುರುವಾಗಿದೆ.


ಎಷ್ಟು ಹೇಳಿದರು ಕೇಳದು ಮಾನವನ ಮನ.

ತನ್ನದೇ ನಡೆಯಬೇಕು ಎಂಬ ಹಠದ ಗುಣ.

ಸ್ವಾರ್ಥ ಬುದ್ದಿಯಿಂದ ಎಲ್ಲವನ್ನು ಹಾಳು ಮಾಡುತ್ತಿದ್ದೇವೆ.

ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡುತ್ತಿದ್ದೇವೆ.


ಪ್ರಕೃತಿಯ ಮುಂದೆ ಮಾನವನ ಆಟ ನಡೆಯದು.

ಎಂಬ ಸತ್ಯವನ್ನು ಯಾರು ಸಹ ಮರೆಯಬಾರದು.

ಮರೆತಿರುವ ಕಾರಣವೇ ಈಗ ಆಪಾಯದ ಗೂಡಾಗಿದೆ.

ಎಚ್ಚೆತ್ತುಕೊಳ್ಳದೆ ಇದ್ದರೆ ಭೀಕರ ಪರಿಣಾಮವೇ ಕಾದಿದೆ.


ಪರಿಸರದ ಸಂರಕ್ಷಣೆ ಮಾಡಬೇಕಾಗಿದೆ ಎಲ್ಲರೂ.

ಪರಿಸರ ಸುರಕ್ಷಿತ ಆಗಿದ್ದರೆ ಬದುಕಬಲ್ಲರೂ.

ತಂತ್ರಜ್ಞಾನದ ಆವಿಷ್ಕಾರ ಜೀವಿಗಳ ನಾಶಕ್ಕೆ ಕಾರಣ.

ಮುಂದೊಮ್ಮೆ  ನಮಗೂ ಕಾದಿದೆ ಘೋರ ಮರಣ.


✍️ ಕು|ಪೂರ್ಣಿಮಾ. ಹೆಚ್. ಬಿ. ( ಕಲ್ಕೆರೆ ಹಾಸನ)

((೨))

ನವರಾತ್ರಿಯ  ನವದುರ್ಗಾವತಾರ


ನವ ದುರ್ಗಾವತಾರದ ಮಹಿಮೆಯ  ನಾನು ಬಣ್ಣಿಸುವೆ

ತಾಯೆ ನವದುರ್ಗೆಯರಾ ಚರಣಕೆ ನಾನು ವ೦ದಿಸುವೆ  l


ಪರ್ವತ ರಾಜನ ಮಗಳಾಗಿ ಶಿವನಾ ಸತಿಯಾಗಿ ನೀ ಮೆರೆದು

ಶೈಲಪುತ್ರಿಯೆ೦ಬ ಮೊದಲವತಾರದಿ

ಶೋಭಿಸುವೆ  l


ಶಿವನನೆ ಪತಿಯಾಗಿ ಪಡೆವುದಕೆ ನಿರ೦ತರ ತಪ ಗೈದು 

ಬ್ರಹ್ಮಚಾರಿಣಿ ಎ0ಬ ರೂಪದಿ ನೀ ಬಿ0ಬಿಸುವೆ  l


ಚ೦ದ್ರಘ೦ಟೆಯಾ ಕಿರೀಟವ ಧರಿಸಿ ಸಿಂಹ ಸಿ೦ಹಾನದಿ

ರಾರಾಜಿಸುವ ಚ೦ದ್ರಘ೦ಟಿ ನಾಮಾ0ಕನದಿ ನೀ ಮೆರೆವೆ  l


ಅಷ್ಟಸಿದ್ಧಿಯಾ ಬ್ರಹ್ಮಾಂಡವ ರಚಿಸಿ ಮ೦ದಹಸನ

ರೂಪದಲಿ ಕೂಷ್ಮಾಂಡ ದೇವಿಯಾಗಿ  ಅವತರಿಸುವೆ  l


ಷಣ್ಮುಖ ಪುತ್ರನ ತೊಡೆಯಲಿ ಇರಿಸಿ ಅಸುರನ ವಧೆಮಾಡಿ

ಸ್ಕ೦ದಮಾತೆಯಾಗಿ ಅವತರಿಸಿ ಭವ್ಯ ಮಾತೆ ನೀ ಎನಿಸುವೆ  l


ಮಹಿಷಾಸುರನ ವಧೆಮಾಡಿ ವಿರಾಟ ರೂಪಿಣಿಯಾಗಿ 

ನೀ ಮೆರೆದು ಕಾತ್ಯಾಯಿನಿ ರೂಪದಿ ರಾರಾಜಿಸುವೆ  l


ಸಹಸ್ರ ಕಮಲವ ಅರಳಿಸಿ ನೀನು ಶ್ಯಾಮಸು೦ದರೆಯಾಗಿ 

ಕಾಳರಾತ್ರಿ ಅವತಾರಿಣಿ ಸ್ವರೂಪದಿ  ಆಕರ್ಷಿಸುವೆ  l


ಗ0ಗಾಜಲ ಪರಿಶುದ್ಧತೆ ಪಡೆದು ಗೌರವರ್ಣ ವಧನೆಯಾಗಿ

ನೀ ಮೆರೆದು ಮಹಾಗೌರಿ ರೂಪದಿ ಶೋಭಿಸುವೆ  l


ಆಧ್ಯಾತ್ಮಿಕ ಸಿದ್ಧಿಯ ನೀ ಪಡೆದು ನಲಿವಿನ ಜೀವಿಯಾಗಿ

ನಲಿದು ಮೆರೆದು ಸಿದ್ಧಿಧಾತ್ರಿ ಯಾಗಿ ಪ್ರಜ್ವಲಿಸುವೆ  l


ನವರಾತ್ರಿಯ ನವದುರ್ಗೆಯರಾ ನವ  ಅವತಾರಕೆ ವ೦ದಿಸುತಾ

ಭಕ್ತರಿಗೆ ಆಶೀರ್ವದಿಸಿ ಹರಸಲು ಜಯ ಘೋಷವ ಮೊಳಗಿಸುವೆ  ll


ಲಲಿತಾ ಕೆ ಆಚಾರ್ ನಿವೃತ್ತ ಪ್ರಾ೦ಶುಪಾಲರು ಬೆಂಗಳೂರು.

((೩))

"ನಾಡಹಬ್ಬ"

ಶೀರ್ಷಿಕೆ: "ದಸರಾ ಸಂಭ್ರಮ"


ಬನ್ನಿರಿ ಬನ್ನಿರಿ ಬ್ರಾಹ್ಮೀ ಸಮಯದಿ ಏಳಿರಿ

ದಸರಾ ಹಬ್ಬವಿಂದು ಶಿರಸ್ನಾನ ಮಾಡಿರಿ

ಕಸವ ಗುಡಿಸಿ ರಂಗವಲ್ಲಿ ಬಿಡಿಸಿರಿ

ಬನ್ನಿಯ ಗಿಡಕ್ಕೆ ಹೋಗಿ ತಿಲಕವ ಲೇಪಿಸಿರಿ!!


ಬನ್ನಿರಿ ಬನ್ನಿರಿ ಹುತ್ತದ ಮಣ್ಣನ್ನು ತನ್ನಿರಿ

ಘಟ್ಟವ ಸ್ಥಾಪಿಸಿ ಮಣ್ಣಿನ ಹಣತೆ ಬೆಳಗಿರಿ

ಕಳಸ ಪ್ರಾಪ್ತಿಯಿಂದ ನವಧಾನ್ಯ ಹರಡಿರಿ

ಸಸಿಯ ಕಂಗೊಳಿಸಿ ಆರತಿಯ ಬೆಳಗಿರಿ!!


ಬಣ್ಣಬಣ್ಣದ ಹೂವುಗಳ ಸುಗಂಧ ಸೂಸಿರಿ

ಧೂಪದಾರತಿ ಬೆಳಗಿ ಭಕ್ತಿಗೀತೆ ಹಾಡಿರಿ

ಜನತೆಯ ಒಳಿತಿಗಾಗಿ ಬೇಡಿಕೊಳ್ಳಿರಿ

ನವಧಾನ್ಯದೈಸಿರಿ "ನವದುರ್ಗೆಯರ" ಸ್ವಾಗತಿಸಿರಿ!!


ತಳಿರು ತೋರಣದಿ ಮನೆಯ ಅಲಂಕರಿಸಿ

ಪಂಚ ಪಾಂಡವರನ್ನು ಪ್ರತಿಷ್ಠಾಪಿಸಿ

ಆಯುಧ ಪೂಜೆಯ ಮಾಡಿ ಹೋಮ ಹವನದಿ

ಮನ ಮತ್ತು ಮನೆಯ ಶುದ್ಧಿಕರಿಸಿ!!


ಹೊಸ ಉಡುಪನ್ನು ಧರಿಸಿ ತಯಾರಾಗಿರಿ

ನಾಡಹಬ್ಬವಿಂದು ಮೈಸೂರು ಅರಮನೆಗೆ ಹೊರಡಿರಿ

ಒಡೆಯರ್ ಸಾಮ್ರಾಜ್ಯದ ಮೈಸೂರು ಅರಮನೆ

ಹೊರಟು ನಿಂತ ಜಂಬೂ ಸವಾರಿ ವಿಜೃಂಭಣೆ!!


"ಚಾಮುಂಡಿಮಾತೆಯ" ಹೊತ್ತ ಆನೆ ನೋಡಿರಿ

ಕೈ ಮುಗಿದು ಶಿರಬಾಗಿ ಬೇಡಿಕೊಳ್ಳಿರಿ

ಹಿರಿಯರಿಗೆ ಬನ್ನಿಯ ಕೊಟ್ಟು ನಮಸ್ಕರಿಸಿರಿ

ಬಾಳು ಬಂಗಾರವಾಗಲೆಂದು ಆಶೀರ್ವಾದ ಪಡೆಯಿರಿ!!


ರಮ್ಯ ಸಂತೋಷ ವಡೆ 

ವಿಜಯನಗರ (ಹೊಸಪೇಟೆ)

ಗೃಹಿಣಿ.

((೪))

ಕನಸು ತುಂಬಿದ ಕವಿತೆ


ಕನಸುಗಳು ಕವಿತೆಯಾದವು

ಕವಿತೆ ಕಣ್ಣಲ್ಲಿ ತುಂಬಿಕೊಂಡಿತು


ಆಸೆ ಅನವರತವಾಯಿತು ಅಂಕುರದ ಟಿಸಿಲು ಮತ್ತೆಲ್ಲೋ ಚಿಗುರಿತು


ಬಾಳು ಬಸವಳಿಯಿತು ಬೆಂಕಿ ಕಡಲಂತೆ ತೋರಿ ತಂಪಾಯ್ತು


ಇಂದು ನಿನ್ನೆಯಾಗಿ ನಾಳೆ ನೆನಪಿನ ರಂಗೋಲಿಯಲ್ಲಿ ಚುಕ್ಕೆಯಾಯಿತು


ಹಿಡಿದಿಡಲಾಗದ ಬೊಗಸೆ  ತುಂತುರಾಗಿ ಹರಿಯಿತು ಮುತ್ತುಗಳು ಇಬ್ಬನಿಯಂತೆ ತೇಲಿತು


ಜೀವಜಲದ ಬಿಂದುವಿನಲ್ಲಿ ಸಿಂಧುವಾಗಿ ಸೇರಲು ಕಾಲ ತಡೆದಿದೆ ಹಿಡಿಗಾತ್ರದ ಪ್ರಾಣವು ಹೋಗಲು ಪ್ರೀತಿಯನ್ನು ಬಯಸಿದೆ


ತಪ್ಪು ಎಲ್ಲರದ್ದಾಗಿದ್ದರೂ ಹೊರುವ ಹೊಣೆ ಒಬ್ಬರ ಮೇಲೆ ಕಣ್ಣೀರು ಜಾರಿದಾಗ ಬೀಳುವ ಹನಿ 

ಒಂದೇ ರೀತಿಯದ್ದು


ಬಿಚ್ಚಿ ಬಯಲಾದಾಗ ಎಲ್ಲವೂ ಕೊನೆಗೊಳ್ಳುವ ಕವಿತೆ ಅಲ್ಲಿಯವರೆಗೆ ಅರ್ಧ ಮುಚ್ಚಿಟ್ಟ ಸತ್ಯ ಇರುವ ದಿನಗಳವರೆಗೂ.


ಎನ್.ಆರ್.ರೂಪಶ್ರೀ, ಕವಯತ್ರಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ  ಮೈಸೂರು.


((೫))

ಹಾಸ್ಯಕವನ - ಬಾಲ್ಯದ ಪೇಚಿನ ಪ್ರಸಂಗ.


ಬಾಲ್ಯದ ದಿನಗಳ ಹಳೆಯ ನೆನಪುಗಳ ಸರಣಿಯಿದು

ಹೇಳಬೇಕು ಅನಿಸಿದ ತಮಾಷೆಯ ಘಟನೆಗಳಿದು                   ||


ಏನೇ ಕೊಟ್ಟರು ಕಾಳಜಿ ಮಾಡುವ ಬುದ್ಧಿವಂತಿಕೆ ನನ್ನದು

ಕಡ್ಡಿ ಐಸ್ ನ್ನು ಮನೆಗೆ ಬಂದು ತಿನ್ನೋಣವೆಂದು

ಬಿಸಿಲಿಗೆ ಕರಗುವುದೆಂದು ಪುಸ್ತಕದ ಚೀಲದಲಿ ಇಟ್ಟಿದ್ದು

ಅದರಿಂದ ಮನೆಯಲಿ ಶಾಲೆಯಲಿ ಬಯ್ಗುಳ ತಿಂದದ್ದು            ||


ಗೆಳೆಯರ ಜೊತೆ ಮರಳ ಆಟದಲಿ ಗುಂಡಿ ತೋಡಿದ್ದು

ಪೈಪೋಟಿಯಲಿ ಮರೆತು  ನಾನೇ ತೋಡಿದ್ದರಲ್ಲಿ ಬಿದ್ದದ್ದು

ಶಾಲೆಯಲಿ ಮೇಜು ಕಾಲ್ಬೆರಳಿನ ಮೇಲೆ ಸರಿದದ್ದು

ಒಸರುತ್ತಿದ್ದ ರಕ್ತವ ಬೆರಗುಗಣ್ಣಿಂದ ನೋಡುತ್ತಿದ್ದದ್ದು               ||


ಮರದಲಿರುವ ಪಾದರಿ ಹೂವನು ನೋಡಿ ಆಸೆಪಟ್ಟಿದ್ದು

ಅದರಿಂದ ಕಿತ್ತುಕೊಡುವೆನೆಂದ ಹೆಂಗಸನು ನಂಬಿದ್ದು

ಅವಳ ಮರುಳುಮಾತಿಗೆ ಚಿನ್ನದೋಲೆಯ ಬಿಚ್ಚಿಕೊಟ್ಟಿದ್ದು

ಭಯದಿ ಅಳುತ ನಿಂತಿರಲು ಇನ್ಯಾರೋ ಮನೆ ತಲುಪಿಸಿದ್ದು        ||


ಹೊರಗೆ ಆಡುತಿದ್ದವ ಏದುಸಿರಲಿ ಒಳಗೋಡಿ ಬಂದದ್ದು

ಆಟೋದಲಿ ಢ್ರಮ್ ಬರುತಿದೆ ಎಂದು ಗಾಭರಿಯಲಿ ಉಸಿರಿದ್ದು

ಕೌತುಕದಿ ಎಲ್ಲರು ಹೊರಬಂದು ನೋಡಿ ಅಜ್ಜಿಯ ಕಂಡದ್ದು

ಮಕ್ಕಳೆದುರು ಅಡ್ಡಹೆಸರಿನ ಬಳಕೆಯ ಫಜೀತಿಯ ತಿಳಿದದ್ದು       ||


ಎತ್ತರ ಸಾಲದೆ ಕಲ್ಲನು ಏರಿ ಸೈಕಲ್ಸವಾರಿ ಕಲಿಯ ಹೊರಟಿದ್ದು

ಇಳಿಯಲು ಕಲ್ಲು ಕಾಣಿಸದೆ ಡಿಕ್ಕಿ ಹೊಡೆದು ಬಿದ್ದದ್ದು

ಗೊಂದಲದಿ ದ್ವಿಚಕ್ರ ವಾಹನ ನಿಲ್ಲಿಸಲು ವೇಗವರ್ಧಕ ಒತ್ತಿದ್ದು

ಕಣ್ಣಿಗೇಟಾಗಿ ವಾಹನ ಚಾಲನೆಗೆ ತಿಲಾಂಜಲಿ ಇಟ್ಟಿದ್ದು                ||

ಪೂರ್ಣಿಮ ಭಗವಾನ್.


((೬))

ಕಾಲ ಚಲಿಸಿದಂತಾಯ್ತು


ಪಕ್ಕದ ಮನೆಗಳ ದೀಪದ ಬೆಳಕಲಿ

ದೀಪಾವಳಿಯ ಕಂಡವನು ನಾನು

ಬಿಡುವಿಲ್ಲದೆ ಬೆಳಗುತ್ತಿದ್ದ ಹಣತೆಯ ಸಾಲು

ಅವುಗಳ ನಡುವೆ 

ಮುರುಕು ಮನೆಯಲಿ ಹರಕು ಬಟ್ಟೆಯಲಿ

ಕಳೆದವು ಎಷ್ಪೋ ಸಂವತ್ಸರಗಳು

ಅಂಗಳ ತುಂಬುವ ಪಟಾಕಿ ಸದ್ದುಗಳು

ಸುರು ಸುರು ಬತ್ತಿ ರಾಕೇಟ್, ಚಿಮ್ಮುವ ಕುಡಿಕೆ

ಅವುಗಳ ಹೊಗೆ ನಮ್ಮ ಮನೆಗೂ ತಟ್ಟಿ

ಮರೆತಿದ್ದ ದೀಪಾವಳಿಯನ್ನು ನೆನಪಿಸುತ್ತಿದ್ದವು

ಮನೆ ಮುಂದಿನ ಲೈಟುಕಂಬಕ್ಕೆ ಅಳವಡಿಸಿದ್ದ ಬಲ್ಬು

ಸರ್ಕಾರದ ಶ್ರೀಮಂತಿಕೆಯ ಸಂಕೇತ!

ಅದರ ಬೆಳಕಲ್ಲೇ ನಡೆದದ್ದು ನಮ್ಮ ಎಷ್ಟೋ ಬದುಕು

ನಮ್ಮವ್ವ ದೇವರ ಮುಂದೆ ಹೊತ್ತಿಸಿದ್ದ ದೀವಿಗೆ

ತೈಲವಿಲ್ಲದೆ ಸೊರಗಿದೆ! ದೇವರೇಕಿಷ್ಟು ಕ್ರೂರಿ?

ನಮ್ಮಪ್ಪನ ಬೆವರಿಗೆ ಬೆಲೆಯಿಲ್ಲವೆ

ನಮ್ಮ ಬೆವರ ಸಂಸ್ಕೃತಿಯಲ್ಲಿ?

ಏನೇನೋ ಪ್ರಶ್ನೆಗಳು ಕಾಡಿದ್ದವು.....

ಕಳೆದುಹೋದ ನೆನಪಿನ ಪುಟ ತೆರೆದಾಗ

ಅಷ್ಟರಲ್ಲಿ ನನ್ನ ಮಕ್ಕಳು ಹೊಸ ಉಡುಗೆ ತೊಟ್ಟು

ಪಟಾಕಿ,ಬಿಲ್ಲು,ಸುರು ಸುರು ಬತ್ತಿ ರಾಕೇಟ್ ಬಿಡುತ್ತಿದ್ದಾರೆ

ಕಾಂಪೌಡ್ ಮೇಲೆ ಮಡದಿ ಇಟ್ಟಿರುವ ಸಾಲು ದೀಪಗಳು

ದೀಪಾವಳಿಯ ಸಂಭ್ರಮ

ನಾನೇ ತಂದುಕೊಟ್ಟದ್ದು

ಎಷ್ಟು ಬದಲಾದ ಬದುಕು

ಕಣ್ಣ ಮುಂದೆಯೆ ಕಾಲ ಚಲಿಸಿದಂತಾಯ್ತು.


     ಕಿರಣ್ ಸಿಡ್ಲೇಹಳ್ಳಿ

((೭))

ಹೆಮ್ಮೆಯ ಕುವರ


ಕನ್ನಡ ನಾಡಿನ ಹೆಮ್ಮೆಯ ಕುವರ

ಕನ್ನಡದಾಸ್ತಿ ನೀನಾದೆಯೋ ಶಿವರಾಮ


ಶ್ರೀ ಕೃಷ್ಣನಿಂದ ಹೆಸರಾದ ಉಡುಪಿಯು

ನಿನ್ನಿಂದ ಗಳಿಸಿತು ಮತಷ್ಟು ಕೀರ್ತಿಯನು

ಕೋಟಾದಲ್ಲಿ ಆಯಿತು ನಾನ್ನಾ ಜನನ

ಕನ್ನಡಾಂಬೆಗೆ ಹರುಷದಿ ಆಗ ತುಂಬಿತು ಮೈಮನ


ಆಂಗ್ಲ ಮಾಧ್ಯಮದಲಿ ನಿನ್ನಾ ಕಲಿಕೆ

ಅದೇಗೊ ಮೂಡಿತು ಕನ್ನಡದೊಲುಮೆ

ಪ್ರತಿದಿನ ಸಾಗಿತು ಕನ್ನಡ ಜ್ಞಾನದ ಗಳಿಕೆ

ಸದಾ ಬೆಳಿಯಿತು ಕನ್ನಡದೇಳಿಗೆಯಾ ದುಡಿಮೆ


ಜ್ಞಾನಪೀಠ ಪುರಸ್ಕೃತ ನೀನು

ಕಡಲ ತೀರದ ಭಾರ್ಗವ ನೀನು

ನಡೆದಾಡುವ ವಿಶ್ವಕೋಶ ನೀನು

ನಿನ್ನೀ ಜ್ಞಾನಕೆ ಶರಣೆಂದೆ ನಾನು


ಸಾರುತಿಹವು ಕಾದಂಬರಿಗಳು

ಪರಿಸರ ಪ್ರೇಮಿ ನಿನೆಂದು

ಪುತ್ತೂರಿನಲ್ಲಿ ನಾನಾ ಸಂಸ್ಥೆಗಳು

ನೇಮಕವಾಯಿತು ಅದು ಬಾಲವನವೆಂದು


ದೇಶ ವಿದೇಶಗಳ ಸುತ್ತಿ ಸುತ್ತಿ

ಅರಿತುಕೊಂಡೆ ಜ್ಞಾನವನು

ಅಕ್ಷರ ಜ್ಞಾನವ ಎಲ್ಲಡೆ ಹರಡಿ

ತೋರಿದೆ ಜನರಿಗೆ ಜ್ಞಾನದ ದಾರಿಯನು...(ಕನ್ನಡ... ಶಿವರಾಮ)


ರಚನೆ: ಸುಮಂಗಲಾ.ವಿ.ಕೆ

ಊರು:ಬೆಳಗಲಿ

ತಾ: ಹುಬ್ಬಳ್ಳಿ

ಜಿ: ಧಾರವಾಡ

((೮))

ಶೀರ್ಷಿಕೆ.. ನಿವೇದನೆ

.....................................

ದೇವ ಅಧಿದೇವತೆ ಆದಿಶಕ್ತಿ ಯೇ

ಮನೋ ಶರಧಿಯ ಅಂತರಾಳದ

ಮುತ್ತುಗಳ ಕಾಂತಿ ಪ್ರ ಕಾಂತಿಯ

ಬೆಳಗಿಸು ಲೋಕಕ್ಕೆ ಸರ್ವಮಂಗಳೆ


ಮಹಿಷಮರ್ದಿನಿ ಮಹೇಶ್ವರಿ

ಮಧುಸೂದನಿ ಮದ್ವೆರಿ

ಶುಂಭ ನಿಶುಂಭಧ್ವಂಸಿನಿ ಶಾಂಭವಿ

ಚಂಡ ಮುಂಡರ ಸಂಹಾರಿಣಿ


ಕೈಲಾಸವಾಸ ನ ಹೃದಯ ನಿವಾಸಿನಿ

ಚತುರ್ಮುಖನ ಹೃದಯ ರಾಣಿ

ಅಂಬುಜ ನಾಭನ ಹೃದಯವಾಸಿ ನೀ

ಶಕ್ತಿ ತ್ರಯ ಅಂಕಿತ ತ್ರಯಂಬಕ ನ ರಾಣಿ/


ಭೂರಿ ಭುವನ ಪೋಷಿತೆ

ಭಕ್ತಜನ ಹೃದಯ ವಿರಾಜಿತೆ

ಶಕ್ತಿ-ಯುಕ್ತಿ ಮುಕ್ತಿ ಆಧಾರಭೂತೆ

ಶಿವಶಕ್ತಿ ಪರಶಿವ ಶಕ್ತಿ ಮಾತೆ


ಶಿರವೇ ರುವ ಹರನ ಶಿರವೇ ರುವ

ಪುನೀತ ಗಂಗಾ ತೆರೆದೊಲು

ಹರನ ಅರನಾರಿ ನಿನ್ನೊಲು

ನನ್ನ ಭಾವಗಂಗೆ ಹರಿಯಲಿ


ನವರಾತ್ರಿ ಅಧಿದೇವತೆ

ನವ ಭಾವಸಂಗಮ ಅಂಕಿತೆ

ಭಾವ ಭಾವಗಳ ಜೀವಾಂಕಿತೆ

ಮಂಗಳಮಯ ಪುನೀತ ಮಯಾಂಕಿತೆ/


ವಿ.ರಾಧಾ ಗುರುರಾಜ್

ಚಾಮರಾಜನಗರ


((೯))

ಶೀರ್ಷಿಕೆ:- ತಾಯಿ ಬರುವಳು


ತಾಯಿ ಬರುವಳು ಶ್ರೀಮಾತೆ ಬರುವಳು

ನಾಡ ಜನರ ನೋವ ಮರೆಸಿ ಹರಸುವುಳು

ಹೊತ್ತು ಹೊಂಡುವ ಮೊದಲು ಶುದ್ಧ ಮನಸಲಿ

ಹೂವು ಕಾಯಿ ಬಿಲ್ವ ಪತ್ರಿಯ ಜೊತೆಯಲಿ|೧|


ರುದ್ರ ನರ್ತನ ತೋರಿ ನಿಂತಳು ಕೆಂಡ ಕಾರುತಲಿ

ದುರ್ಗಾ ಮಾತೆಯು ದುಷ್ಟ ಜನರ ಚಂಡಾಡುತಲಿ

ಹರನು ಬಂದನು ಶಾಂತಳಾಗೆಂದು ಅರುವಿದನು

ಕ್ಷಮಿಸೆನೆನ್ನುತ ಮೆಟ್ಟಿ ನಿಂತಳು ಶಿವನ ಎದೆಯನು|೨|


ಮೂರು ಲೋಕ ನನ್ನದೆಂದ ಕೆಟ್ಟ ಹುಳವ ಕೊಂದು

ದೇವ ಗಣರ ಅಸುರ ಭಯವ ಸುಟ್ಟು ನಕ್ಕಳು ಇಂದು

ಶರಣು ಬಂದ ಜನವ ತಾಯಿ ಬಿಡದೆ ಕಾಯ್ವಳು 

ಭಕ್ತಿ ಮಾರ್ಗವ ಪಿಡಿದ ಮನಕೆ ಸುಖವ ಕೊಡುವಳು|೩|


ಹಸಿದ ಶಿವಗೆ ಅನ್ನ ನೀಡಿದ ಅನ್ನಪೂರ್ಣೇಶ್ವರಿ

ಕಾಳಿದಾಸಗೆ ಒಲಿದು ನೀಡಿದೆ ಜ್ಞಾನದಾ ಸಿರಿ

ಹರನ ಜಡೆಯಿಂದ ಧರೆಗೆ  ಇಳಿದ ಗಂಗೆ

ನರನ ಪಾಪವ ತೊಳೆದು ಹೋದೆ ಶಿವನ ಕಡೆಗೆ|೪|


ಕಮಲದೂವ ತಂದು ನಿಂತೆವು ತೋರು ನಿನ್ನ ಪಾದ

ಗಂಧಲೇಪಿತ ದ್ರವ್ಯ ದೂಪವ ಬೆಳಗಿ ಹಿಡಿವೆ ಪಾದ

ಪರಿಶುದ್ಧ ಮನದಿ ಪಚ್ಚ ಕರ್ಪೂರಧಾರತಿ ನಿನಗೆ

ಕೊನೆಯ ವರೆಗೂ ಅಭಯ ಹಸ್ತ ನೀಡು ನಮಗೆ|೫|



......✍️ನಿchi

ಚಿನ್ನಯ್ಯ ಹೀರೆಮಠ ಹುಬ್ಬಳ್ಳಿ


((೧೦)

ಸಾಹಿತ್ಯಲೋಕದ ಶ್ರೀಮಂತ


ಉಡುಪಿಯ ಕೋಟ ಎಂಬಲ್ಲಿ ಹುಟ್ಟಿದಂತ ಧೀಮಂತ

ಕನ್ನಡತಾಯಿ ಮಡಿಲಾಗ ಇವರೂ ಒಬ್ಬ ಸಾಮಂತ

ಕಡಲ ತೀರದ ಭಾರ್ಗವ ಸಾಹಿತ್ಯ ಲೋಕದ ಶ್ರೀಮಂತ

ನಡೆದಾಡೋ ವಿಶ್ವಕೋಶ ಅವರೇ ನಮ್ಮ ಕಾರಂತ..!


ಬೆಟ್ಟದ ಜೀವ, ಮರಳಿ ಮಣ್ಣಿಗೆ ಮೂಕಜ್ಜಿಯ ಕನಸು

ಓದುವಾಗ ಕಳದೊಯ್ತಲ್ಲ ಓದುಗನ ಮೈ ಮನಸು

ಕನ್ನಡ ಸಾಹಿತ್ಯ ಓದುವಾಗ ಮನಸಿಗೇನೋ ಸೊಗಸು

 ಮನಸಿನಾಗೆ ಉಳಿದಂಗಾಯ್ತು ಪಾತ್ರಗಳ ಮುನಿಸು


ಪರಿಸರ ಪ್ರೇಮಿ ಕಾರಂತರ ಸಾಹಿತ್ಯವೆಲ್ಲ ನವನೀತ

ಓದಿದ ಭಾವ ತಲೆದೂಗಿ ಆಗತೈತಿ ಪುನೀತ

ಭಂಡಾರ ಬೆಡಗಲಿ ಬರದಾರ ಕನ್ನಡದ ಸಾಹಿತ್ಯ

ಮನಸಿನ್ಯಾಗ ಮಾಸದಂಗ ಕಾರಂತರು ಅಮರ್ತ್ಯ


ಕಾರಂತರ ಸಾಹಿತ್ಯ ಅಪರಿಮಿತ ಅಗಣಿತ ಪಾಂಡಿತ್ಯ

ಹುಟ್ಟತೈತಿ ಓದುಗನಿಗೆ ತನ್ನಿಂತಾನೇ ಲಾಲಿತ್ಯ

ಬತ್ತದ ಒಲುಮೆ ಅಮೃತ ಚಿಲುಮೆ ಕಾರಂತರ ಸಾಹಿತ್ಯ

ಮತ್ತೊಮ್ಮೆ ಹುಟ್ಟಿ ಬರಲಿ ಕನ್ನಡ ನಾಡಿನ ಆದಿತ್ಯ


✍️-ಲಕುಮಿಕಂದ ಮುಕುಂದ


No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...